ಎಸ್ಪರ್ಸನ್, ಆಟೋ: 1860-1943. ಡೆನ್ಮಾರ್ಕ್ ದೇಶದ ಪ್ರಖ್ಯಾತ ಭಾಷಾವಿಜ್ಞಾನಿ, ಭಾಷಾವಿಜ್ಞಾನದ ಅಧ್ಯಯನಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಈತ ಡೆನ್ಮಾರ್ಕಿನ ರಾನ್ಡರ್ಸ್ ಪಟ್ಟಣದಲ್ಲಿ 1860ನೆಯ ಜುಲೈ 16ರಂದು ಜನಿಸಿದ. ಈತನ ಆಡುಮಾತು ಡಚ್ ಭಾಷೆ; ಈತ ಪರಿಶೋಧನೆಗೆ ಕೈಗೊಂಡ ವಿಷಯ ಆಂಗ್ಲಭಾಷೆ ಮತ್ತು ವ್ಯಾಕರಣ. ಇವುಗಳಲ್ಲಿ ಅತ್ಯಂತ ಶ್ರೇಷ್ಠಮಟ್ಟದ ಅಧಿಕಾರವುಳ್ಳ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದ. ಯುರೋಪಿನಲ್ಲಿ ಆಧುನಿಕ ಪದ್ಧತಿಯಲ್ಲಿ ಭಾಷಾ ಬೋಧನೆ ಮಾಡಬೇಕೆಂಬ ಒಂದು ರೀತಿಯ ಚಳವಳಿಯನ್ನೇ ಆರಂಭಿಸಿ ಯಶಸ್ವಿಯಾದ. ಧ್ವನಿವಿಜ್ಞಾನ, ಭಾಷಾವಿಜ್ಞಾನ, ಆಂಗ್ಲಭಾಷಾ ಚರಿತ್ರೆಗಳ ಬೆಳೆವಣಿಗೆ, ಅಂತಾರಾಷ್ಟ್ರೀಯ ಭಾಷಾ ಚಳವಳಿ-ಮುಂತಾದ ಕಾರ್ಯಕ್ಷೇತ್ರಗಳಲ್ಲಿ ದುಡಿದಿದ್ದಾನೆ.
1893ರಲ್ಲಿ ಕೋಪೆನ್ ಹೇಗೆನ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕ ಪದವಿಯನ್ನು ಸ್ವೀಕರಿಸಿದ. ನ್ಯೂಯಾರ್ಕಿನ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ 1909-10ರವರೆಗೆ ವಿಶೇಷ ಉಪನ್ಯಾಸಗಳನ್ನು ನಡೆಸಿದ. ಆಗಾಗ ಇಂಗ್ಲೆಂಡಿಗೂ ಹೋಗಿ ಅಲ್ಲೂ ಪ್ರೌಢಪ್ರವಚನಗಳನ್ನು ಮಾಡಿದ. ಅಲ್ಲಿಂದೀಚೆಗೆ ತನ್ನ ವಿಶ್ವವಿದ್ಯಾನಿಲಯದಲ್ಲಿಯೇ ನೆಲೆಸಿ ಅನೇಕ ಗ್ರಂಥಗಳನ್ನು ರಚಿಸಿದ. ಜನರಲ್ಲಿ ನಿತ್ಯ ಬಳಕೆಯಲ್ಲಿರುವ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಭಾಷೆಯನ್ನು ಬೋಧಿಸಬೇಕೆಂಬ ತತ್ತ್ವವನ್ನು ಪ್ರತಿಪಾದಿಸಿ ಆ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿದ.

ಈತ ಬರೆದಿರುವ ಗ್ರಂಥಗಳು ಮತ್ತು ಲೇಖನಗಳ ಸಂಖ್ಯೆ ಸುಮಾರು 400. ಅವುಗಳಲ್ಲಿ ಬಹು ಮುಖ್ಯವಾದ ಗ್ರಂಥಗಳು: 1 ಇಂಗ್ಲಿಷ್ ಭಾಷೆಯ ಬೆಳೆವಣಿಗೆ ಮತ್ತು ರಚನೆ (ಗ್ರೋತ್ ಅಂಡ್ ಸ್ಟ್ರಕ್ಚರ್ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್, 1905). 2 ಭಾಷೆಯಲ್ಲಿ ಪ್ರಗತಿ (ಪ್ರೋಗ್ರೆಸ್ ಇನ್ ಲ್ಯಾಂಗ್ವೆಜ್. 1894). 3 ಜರ್ಮನ್ ಭಾಷೆಯಲ್ಲಿ ಬರೆದಿರುವ ಲಾರ್ಬುಶ್ಚ್‌ ಡರ್ ಪೋನೆಟಿಕ್ (1904) ಎಂಬುದು ಸಾಮಾನ್ಯ ಧ್ವನಿವಿಜ್ಞಾನದ ವಿಷಯವನ್ನು ವೈಜ್ಞಾನಿಕ ರೀತಿಯಲ್ಲಿ ವಿವರಿಸುವ ದೀರ್ಘವೂ ಉತ್ತಮವೂ ಆದ ಪುಸ್ತಕ. 4 ಶಿಕ್ಷಾಶಾಸ್ತ್ರ (ಪೋನೆಟಿಕ್ಸ್‌, 1899). 5 ಭಾಷೆ, ಅದರ ಮೂಲ, ಸ್ವಭಾವ ಮತ್ತು ಬೆಳೆವಣಿಗೆ (ಲ್ಯಾಂಗ್ವೇಜ್, ಇಟ್ಸ್‌ ನೇಚರ್, ಡೆವಲಪ್ಮೆಂಟ್ ಅಂಡ್ ಆರಿಜಿನ್. 1922). 6 ವ್ಯಾಕರಣಶಾಸ್ತ್ರದ ತತ್ತ್ವ (ದಿ ಫಿಲಾಸಫಿ ಆಫ್ ಗ್ರ್ಯಾಮರ್. 1924). 7 ಏಳು ಸಂಚಿಕೆಗಳಲ್ಲಿ ಬರೆದಿರುವ, ವಿಶ್ವಕೋಶದಂತಿರುವ ಆಧುನಿಕ ಇಂಗ್ಲಿಷ್ ವ್ಯಾಕರಣ ಪುಸ್ತಕಗಳು (ಮಾಡರ್ನ್ ಇಂಗ್ಲಿಷ್ ಗ್ರ್ಯಾಮರ್. 1909). ಈ ಗ್ರಂಥಗಳಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯಬದ್ಧವಾದ ಜಿಗುಟು ನಿಯಮಗಳ ಮಧ್ಯದಲ್ಲಿ ಸೆರೆಸಿಕ್ಕಿದ್ದ ಲ್ಯಾಟಿನ್ ವ್ಯಾಕರಣಗಳ ಪದ್ಧತಿಯನ್ನು ಖಂಡಿಸಿ, ಅವುಗಳ ವೈಜ್ಞಾನಿಕತೆಯನ್ನು ಅಲ್ಲಗಳೆಸಿರುವುದಲ್ಲದೆ ವ್ಯಾಕರಣವೂ ಒಂದು ರೀತಿಯಲ್ಲಿ ಸಂಬಂಧಾತ್ಮಕವಾದುದು ಹಾಗೂ ಪ್ರಗತಿಶೀಲವಾದುದು ಎಂಬುದನ್ನು ನಿರೂಪಿಸಿದ್ದಾನೆ. ಈ ಗ್ರಂಥಗಳಲ್ಲಿ ಆತ ಅನುಸರಿಸಿರುವ ಮಾರ್ಗವೂ ನಿರೂಪಿಸಿರುವ ವಿಷಯಗಳೂ ಶಾಸ್ತ್ರೀಯವಾದ ವಿಚಾರ ಪದ್ಧತಿಯೂ ಹೊಸದಾಗಿ ಸೂಚಿಸಿರುವ ಅಂಶಗಳೂ ಎಲ್ಲ ಭಾಷೆಗಳಿಗೂ ಸಾಮಾನ್ಯವಾಗಿ ಅನ್ವಯಿಸುತ್ತವೆ. ಅವುಗಳ ಅಭ್ಯಾಸದಿಂದ ಉಂಟಾಗುವ ಹೊಸ ದೃಷ್ಟಿ ನಮ್ಮ ಭಾಷಾ ಚರಿತ್ರೆ, ವ್ಯಾಕರಣಗಳ ಕ್ರಮವನ್ನು ತಿರುಗಿ ವಿಮರ್ಶೆ ಮಾಡುವ ಪ್ರೇರಣೆಯನ್ನು ಮೂಡಿಸುತ್ತದೆ. ಇವಲ್ಲದೆ ಈತ 8 ಅನಲಿಟಿಕ್ ಸಿಂಟ್ಯಾಕ್ಸ್‌ (1937), 9 ಎಸೆನ್ಷಿಯಲ್ಸ್‌ ಆಫ್ ಗ್ರ್ಯಾಮರ್, 10 ಲಿಂಗ್ವಿಸ್ಟಿಕ್, 11 ಹೌ ಟು ಟೀಚ್ ಎ ಫಾರಿನ್ ಲ್ಯಾಂಗ್ವೇಜ್, 12 ಇನ್ ಇಂಟರ್ ನ್ಯಾಷನಲ್ ಲ್ಯಾಂಗ್ವೇಜ್, 13 ಮ್ಯಾನ್ ಕೈಂಡ್, ನೇಷನ್ ಅಂಡ್ ಇಂಡಿವಿಜುಯಲ್-ಮೊದಲಾದ ಗ್ರಂಥಗಳನ್ನು ಬರೆದಿದ್ದಾನೆ.

ಈತ ವೈಯಾಕರಣಿಯೇನೋ ಅಹುದಾದರೂ ಒಣ ವೈಯಾಕರಣಿಯಲ್ಲ. ಭಾಷೆಯನ್ನು ಸುಲಭವಾಗಿ ಕಲಿಯುವುದಕ್ಕೆ ಉತ್ಕೃಷ್ಟವಾದ ಮಾರ್ಗ ಯಾವುದೆಂಬುದನ್ನು ಕಂಡುಹಿಡಿಯುವುದು ಈತನ ಉದ್ದೇಶವಾಗಿತ್ತು. ಇದಕ್ಕಾಗಿ ಈತ ಭಾಷೆಯ ಮೂಲ ವನ್ನೂ ಬೆಳೆವಣಿಗೆಯನ್ನೂ ಕೆದಕಲು ಹೊರಟ. ತನ್ನ ಜೀವನದ ಆರಂಭದೆಶೆಯಲ್ಲಿ ಡಾರ್ವಿನ್ನನ ವಿಕಾಸವಾದದಿಂದ ಪ್ರಭಾವಿತನಾಗಿದ್ದಂತೆ ಕಂಡುಬರುತ್ತದೆ. ಆದರೆ ಕಾಲಾಂತರದಲ್ಲಿ ಅದರ ಪ್ರಭಾವದಿಂದ ಮುಕ್ತನಾಗಿ ಮಗು ಕಲಿಯುವ ಭಾಷೆಯ ಅವಸ್ಥೆಗಳನ್ನು ವಿಶ್ಲೇಷಿಸಿ ಆ ಮೂಲಕ ಭಾಷೆಯ ಹುಟ್ಟನ್ನು ಕಂಡುಹಿಡಿಯುವ ಪ್ರಯತ್ನವನ್ನು ಈತ ಮಾಡಿದ. ಅನಂತರ ಭಾಷಾಬೋಧನೆಯ ಕ್ರಮವನ್ನು ಸೂಚಿಸಿದ. ಡೆನ್ಮಾರ್ಕ್ ದೇಶದ ಭಾಷಾ ಬೋಧನೆಯ ಕ್ರಮವೆಲ್ಲ ಎಸ್ಟರ್ಸನ್ ಸೂಚಿಸಿದ ಮಾರ್ಗದಲ್ಲಿಯೆ ಇಂದು ನಡೆಯುತ್ತಿದೆ.

ಫಿಲಾಸಫಿ ಆಫ್ ಗ್ರ್ಯಾಮರ್ ಎಂಬ ಗ್ರಂಥದಲ್ಲಿ ಈತ ತನಗೆ ಪರಿಚಯವಿದ್ದ ಐರೋಪ್ಯ ಭಾಷೆಗಳ ವ್ಯಾಕರಣಗಳನ್ನೆಲ್ಲ ಸಮದೃಷ್ಟಿಯಿಂದ ನೋಡಿ ವ್ಯಾಕರಣ ಶಾಸ್ತ್ರದ ಜೀವವೇನೆಂಬುದನ್ನು ನಿರೂಪಿಸಿದ್ದಾನೆ. ಪ್ರತಿಯೊಂದು ಭಾಷೆಯನ್ನಾಡುವ ಜನರ ಮನೋಧರ್ಮ ಅವರವರ ವ್ಯಾಕರಣಗಳಲ್ಲಿ ಅಡಕವಾಗಿದೆ. ಮನುಷ್ಯನ ಬುದ್ಧಿ ಕಾಲದೇಶಗಳ ತಡೆಯಿಲ್ಲದೆ ಭಾಷೆಯ ಬೆಳೆವಣಿಗೆಯಲ್ಲಿ ಅನುಸರಿಸಿರುವ ಕ್ರಮ ಸಾಮಾನ್ಯ ವಾಗಿ ಒಂದೇ ರೀತಿಯದು ಎಂದು ಇಲ್ಲಿ ಈತ ತೋರಿಸಿದ್ದಾನೆ. ಭಾಷೆಯ ಚರಿತ್ರೆಯನ್ನು ಬುದ್ಧಿಯ ಚರಿತ್ರೆಯೆಂದೂ ಹೇಳಬಹುದು. ಯಾವುದಾದರೂ ಭಾಷೆಯ ವ್ಯಾಕರಣ ರಚನೆಗೆ ಸಾಮಾನ್ಯವಾಗಿ ಗ್ರಾಂಥಿಕ ಪ್ರಯೋಗಗಳನ್ನು ಆಧಾರವಾಗಿಟ್ಟುಕೊಳ್ಳುವುದು ರೂಢಿಯಾಗಿದೆ. ವ್ಯವಹಾರದಲ್ಲಿಲ್ಲದ ಭಾಷೆಯ ವಿಷಯದಲ್ಲಿ ಇದು ಸರಿಯಾದರೂ ಅದು ಜೀವಂತವಾಗಿದ್ದಲ್ಲಿ, ಅಂದರೆ ವ್ಯವಹಾರಿಕವಾಗಿದ್ದಲ್ಲಿ ಅದರ ಆ ಸ್ವರೂಪವನ್ನು ಅವಶ್ಯವಾಗಿ ಗಮನಿಸಬೇಕೆಂದು ಎಸ್ಟರ್ಸನ್ ಒತ್ತಿ ಹೇಳಿದ್ದಾನೆ. ಇಂದು ನಡೆಯುತ್ತಿರುವ ವ್ಯತ್ಯಾಸಗಳೂ ಹಿಂದೆ ನಡೆದಿರುವುವೂ ಯಾವುದಾದರೂ ನಿಯಮಗಳಿಗೆ ಒಳಪಟ್ಟಿರ ಬೇಕೆಂಬ ಅಂಶ ಖಚಿತವಾಗಿ ಈ ಗ್ರಂಥದಿಂದ ತಿಳಿಯುತ್ತದೆ. ಇದರಿಂದ ವ್ಯಾಕರಣ ರಚನೆಗೆ ಇದು ಬಹಳ ಸಹಾಯಕರ. ವ್ಯಾಕರಣದಲ್ಲಿ ಒಂದು ಭಾಷೆಯ ಲಕ್ಷಣವನ್ನು ಹೇಳುವುದು ಮುಖ್ಯವಾದರೂ ಕಲಿಯುವವನ ದೃಷ್ಟಿಯಿಂದಲೂ ಅದನ್ನು ರಚಿಸಬೇಕು. ಅದು ಅವನಿಗೆ ಕ್ಲೇಶವಿಲ್ಲದ ಮಾರ್ಗವನ್ನು ಕಾಣಿಸಬೇಕು. ಸಾಮಾನ್ಯ ಲಕ್ಷಣಗಳನ್ನು ಬೇಸರಗೊಳಿಸದೆ ಸಂದೇಹಕ್ಕೆ ಅವಕಾಶವಿಲ್ಲದಂತೆ ತಿಳಿಸಬೇಕು. ಒಬ್ಬನ ಮಾತೃ ಭಾಷೆಯ ವ್ಯಾಕರಣದ ಅಭ್ಯಾಸದಲ್ಲಿಯೇ ಅವನಿಗೆ ಇತರ ಭಾಷೆಗಳ ವ್ಯಾಕರಣಗಳ ಸಾಮಾನ್ಯ ಪದ್ಧತಿಯೂ ಹಸ್ತಗತವಾಗುವಂತಿರಬೇಕು-ಇವೇ ಮುಂತಾದ ಹಲವು ತತ್ತ್ವಗಳ ಪ್ರತಿಪಾದನೆ ಈ ಗ್ರಂಥದಲ್ಲಿದೆ. ವ್ಯಾಕರಣಶಾಸ್ತ್ರದಲ್ಲಿ ಹೊಸ ಮಾರ್ಗ ಉಂಟೆಂಬುದು ಇದರಿಂದ ವ್ಯಕ್ತವಾಗುತ್ತದೆ. ಅದನ್ನು ಕಾಲಕಾಲಕ್ಕೆ ವಿಮರ್ಶೆಗೆ ಒಳಪಡಿಸಿ ತಿದ್ದುವ ಆವಶ್ಯಕತೆ ಇದ್ದೇ ಇದೆ. ಈ ಗ್ರಂಥವೊಂದರಿಂದಲೇ ಆತನ ವ್ಯಕ್ತಿತ್ವವನ್ನು ಮನಗಾಣಬಹುದು. ಇದು ಎಸ್ಟರ್ಸನ್ನನ ಪರಿಣತ ವಿದ್ವತ್ತಿನ ಫಲವಾಗಿದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಗ್ರಂಥಗಳಲ್ಲಿ ಭಾಷೆಯ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶಿಸಿ ಭಾಷಾವಿಜ್ಞಾನದ ಸರ್ವತೋಮುಖವಾದ ಬೆಳೆವಣಿಗೆಗೆ ಈತ ಕಾರಣನಾಗಿದ್ದಾನೆ. ಪ್ರಸಿದ್ಧ ಭಾಷಾವಿಜ್ಞಾನಿಗಳು ಈತನ ಪುಸ್ತಕಗಳನ್ನು ಆಗಾಗ್ಗೆ ಆಧಾರಗ್ರಂಥಗಳಾಗಿ ಉದಾಹರಿಸುತ್ತಿದ್ದಾರೆ. ಭಾಷೆ ಮತ್ತು ಭಾಷಾ ವಿಜ್ಞಾನಗಳ ಮತ್ತು ಭಾಷಾ ಬೋಧನೆಯ ಬಗ್ಗೆ ಎಸ್ಟರ್ಸನ್ ಮಾಡಿರುವ ಕೆಲಸ ಬಹು ಮಹತ್ತ್ವದ್ದು.          (ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ